ಬೆಂಗಳೂರು ರೋಮಾಂಚಕ ಗೆಲುವನ್ನು ದಾಖಲಿಸಿದೆ

ನಾರ್ತ್‌ಈಸ್ಟ್ ಎಫ್ ಸಿ ವಿರುದ್ಧ ಬೆಂಗಳೂರು ತಂಡಕ್ಕೆ 2-1 ಜಯ, ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಬಿಎಫ್‌ಸಿ

ಬೆಂಗಳೂರು: ಎದುರಾಳಿ ತಂಡದ ಆಟಗಾರ ನೀಡಿದ ಉಡುಗೊರೆ ಗೋಲಿನ ಜತೆಗೆ ಚೆಂಚ್ ಗಿಲ್‌ಶೆನ್ ದಾಖಲಿಸಿದ ಗೋಲಿನ ನೆರವಿನಿಂದ ಬೆಂಗಳೂರು ಎಫ್ ಸಿ ಪ್ರಸಕ್ತ ಇಂಡಿಯನ್ ಸೂಪರ್ ಲೀಗ್‌ನ ತನ್ನ 13ನೇ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್ಸಿ ವಿರುದ್ಧ ಗೆಲುವು ದಾಖಲಿಸಿ, ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಇತ್ತೀಚೆಗೆ ಪದ್ಮಶ್ರೀ ಗೌರವಕ್ಕೆ ಭಾಜನರಾದ ಸುನಿಲ್ ಛತ್ರಿ ಸಾರಥ್ಯದ ಬಿಎಫ್ ಸಿ 2-1 ಗೋಲ್‌ಗಳಿಂದ ನಾರ್ತ್‌ಈಸ್ಟ್ ಯುನೈಟೆಡ್ ತಂಡಕ್ಕೆ ಸೋಲುಣಿಸಿ ಪೂರ್ಣ ಮೂರು ಅಂಕ ಸಂಪಾದಿಸಿದೆ. ಇದರೊಂದಿಗೆ ಆಡಿದ 13 ಪಂದ್ಯಗಳಲ್ಲಿ ಒಟ್ಟು 30 ಅಂಕ ಕಲೆಹಾಕಿದ ಬೆಂಗಳೂರು ತಂಡ ಮೊದಲ ಸ್ಥಾನಕ್ಕೇರಿದೆ. ಬಿಎಫ್ಸಿ ಪರ ಮಿಸ್ತಾವ್ ಕೊಮೊರ್ (14ನೇ ನಿಮಿಷ – ಉಡುಗೊರೆ ಗೋಲು) ಮತ್ತು ಚೆಂಚೊ (71ನೇ ನಿ.) ಗೋಲ್ ದಾಖಲಿಸಿದರೆ, ಯುನೈಟೆಡ್ ಎಫ್ ಸಿ ಪರ ಫೆಡೆರಿಕೊ ಗಲ್ಲೆಗೊ (60ನೇ ನಿ.) ಏಕೈಕ ದಾಖಲಿಸಿದರು.

ವಿರಾಮಕ್ಕೆ 1-0 ಅಂತರದಲ್ಲಿ ಮುನ್ನಡೆ ಕಂಡುಕೊಂಡ ಬ್ಲೂಸ್, ದ್ವಿತೀಯಾರ್ಧದಲ್ಲಿ ಬಿಗುವಿನ ದಾಳಿ ನಡೆಸಿ ಗೋಲ್ ಗಳಿಕೆಯ ಹಲವು ಅವಕಾಶಗಳನ್ನು ಸೃಷ್ಟಿಸಿತಾದರೂ ಪ್ರವಾಸಿ ತಂಡ ಮಾತ್ರ ದಿಟ್ಟ ರಕ್ಷಣೆ ಒಡ್ಡಿತಲ್ಲದೆ ಪ್ರತಿ ಹೋರಾಟ ನಡೆಸಿತು. ಇದರ ಪರಿಣಾಮ 60ನೇ ನಿಮಿಷದಲ್ಲಿ ಫೆಡೆರಿಕೊ ಗಲ್ಲೆಗೊ ಆತಿಥೇಯ ತಂಡದ ರಕ್ಷಣಾ ಕೋಟೆಯನ್ನು ಬೇಧಿಸಿ ತಂಡದ 1-1ರ ಸಮಬಲದ ಹೋರಾಟಕ್ಕೆ ಸಾಕ್ಷಿಯಾದರು. ಆದರೆ 71ನೇ ನಿಮಿಷದಲ್ಲಿ ಚೆಂಚೊ ಅದ್ಭುತ ಕಾಲ್ಬಳಕ ತೋರುವ ಮೂಲಕ ಆತಿಥೇಯ ತಂಡದ 2-1ರ ಮುನ್ನಡೆಗೆ ಕಾರಣರಾದರು.

ರಾಮಕ್ಕೂ ಮುನ್ನ ನಾರ್ತ್‌ಈಸ್ಟ್ ತಂಡದ ಮತ್ತೊಬ್ಬ ಆಟಗಾರ ಜೋಸ್ ಲೀಡೂ ಸಹ ಹಳದಿ ಕಾರ್ಡ್‌ಗೆ ಗುರಿಯಾದರು. ಇದು ಪ್ರವಾಸಿ ತಂಡದ ಒತ್ತಡಕ್ಕೆ ಒಳಗಾಗಿದ್ದನ್ನು ಬಿಂಬಿಸಿತು. ಆರಂಭಿಕ ಮುನ್ನಡೆಯಿಂದ ವಿಶ್ವಾಸ ಹೆಚ್ಚಿಸಿಕೊಂಡ ಬಿಎಫ್ಸಿ ಹಲವು ಬಾರಿ ಗೋಲಿನ ಯತ್ನ ನಡೆಸಿತು. ಆದರೆ ಯಾವುದೇ ಫಲ ನೀಡಲಿಲ್ಲ. ಈ ಮಧ್ಯೆ ಆತಿಥೇಯ ಆಟಗಾರರಿಗೆ ಅಡ್ಡಿಯಾದ ಹಿನ್ನೆಲೆಯಲ್ಲಿ ಪ್ರವಾಸಿ ತಂಡದ ಮಾಟೊ ಗ್ರಾಜಿಕ್ ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು. 33 ನಿಮಿಷದಲ್ಲಿ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ ಮುನ್ನಡೆ ವಿಸ್ತರಿಸುವ ಉತ್ತಮ ಅವಕಾಶವನ್ನು ಕೈಚೆಲ್ಲಿದ ಪರಿಣಾಮ 1-0 ಅಂತರದ ಹೋರಾಟ ಮುಂದುವರಿಯಿತು.

ನಾರ್ತ್‌ಈಸ್ಟ್ ಯುನೈಟೆಡ್ ತಂಡದ ಮಿಸ್ಲಾವ್ ಕೊಮೊರ್ ನೀಡಿದ ಉಡುಗೊರೆ ಗೋಲಿನ ನೆರವಿನಿಂದ ಬೆಂಗಳೂರು ಎಫ್ಸಿ ಪ್ರಥಮಾರ್ಧದಕ್ಕೂ ಮುನ್ನವೇ 1-0 ಅಂತರದಲ್ಲಿ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಯಿತು. ಪಂದ್ಯದ 14ನೇ ನಿಮಿಷದಲ್ಲಿ ನಾಯಕ ಸುನಿಲ್ ಛತ್ರಿ ಚೆಂಡನ್ನು ಉದಾಂತ ಸಿಂಗ್ ಅವರತ್ತ ದೂಡಿದರು. ಆದರೆ ಚೆಂಡು ಫೆಡೆರಿಕೊ ಅವರನ್ನು ತಾಗಿ ನಂತರ ಮಿಸ್ಲಾವ್ ಕೊಮೊರ್‌ ಮೂಲಕ ಗೋಲ್ ಪೆಟ್ಟಿಗೆ ಸೇರಿತು. ಗೋಲ್ ತಡೆಯುವ ಯತ್ನದಲ್ಲಿ ಮಸ್ಲಾವ್ ಪ್ರಮಾದವೆಸಗಿದ ಪರಿಣಾಮ ಪ್ರವಾಸಿ ಬೆಂಗಳೂರು ಎಫ್ ಸಿ 1-0 ಅಂತರದ ಮುನ್ನಡೆ ಕಂಡುಕೊಂಡಿತು. ಪಂದ್ಯ ಆರಂಭಗೊಂಡ ಎರಡೇ ನಿಮಿಷದಲ್ಲಿ ಆತಿಥೇಯ ಬಿಎಫ್ಸಿ ಮೊದಲ ಕಾರ್ನರ್ ಗಿಟ್ಟಿಸಿತು.

ಇದರ ಲಾಭ ಪಡೆಯಲು ರಿನೋ ಆ್ಯಂಟೊ ನಡೆಸಿದ ಯತ್ನವನ್ನು ರಾಬರ್ಟ್ ವಿಫಲಗೊಳಿಸಿದರು. ಬೆಂಗಳೂರು ಎಫ್‌ಸಿ ತನ್ನ ಮುಂದಿನ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಫೆ.6ರಂದು ಕೇರಳ ಬ್ಲಾಸ್ಟರ್ಸ್ ತಂಡವನ್ನು ಎದುರಿಸಲಿದೆ.