ಬ್ಲಾಸ್ಟರ್ಸ್ ಜತೆ ಅಂಕ ಹಂಚಿಕೊಂಡ ಬಿಎಫ್‌ಸಿ

ಬೆಂಗಳೂರು ಎಫ್ಸಿ-ಕೇರಳ ಬ್ಲಾಸ್ಟರ್ಸ್ ನಡುವಿನ ಪಂದ್ಯ 2-2ರಲ್ಲಿ ಡ್ರಾ, ಛತ್ರಿ ಪಡೆಯ ಸೆಮಿಫೈನಲ್ ಹಾದಿ ಮುಂದಕ್ಕೆ

ಬೆಂಗಳೂರು: ಸುನಿಲ್ ಛತ್ರಿ ಮತ್ತು ಉದಾಂತ ಸಿಂಗ್ ದಾಖಲಿಸಿದ ಗೋಲ್‌ಗಳ ನೆರವಿನಿಂದ ಬೆಂಗಳೂರು ಎಫ್ ಸಿ ಐಎಸ್ಎಲ್‌ನ 70ನೇ ಹಣಾಹಣಿಯಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್ ಸಿ ವಿರುದ್ಧ ಸೋಲಿನಿಂದ ಪಾರುಗೊಂಡು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಗೊಂಡಿದೆ.

ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮಹತ್ವದ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ಬೆಂಗಳೂರು ಎಫ್ ಸಿ 2-2 ಗೋಲ್‌ಗಳಿಂದ ಕೇರಳ ಬ್ಲಾಸ್ಟರ್ಸ್ ಎಫ್ ಸಿ ವಿರುದ್ದ ಡ್ರಾ ಮಾಡಿಕೊಂಡು ಕೇವಲ ಒಂದು ಅಂಕ ಕಲೆಹಾಕಿತು. ಹೀಗಾಗಿ ನಾಲ್ಕು ಪಂದ್ಯಗಳು ಬಾಕಿ ಇರುವಂತೆಯೇ ಕೇರಳ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆ ಪಡೆಯುವ ಕೋಚ್ ಕ್ವಾಡ್ರಟ್ ಬಳಗಕ್ಕೆ ಅಲ್ಪ ಹಿನ್ನಡೆ ಉಂಟಾಯಿತು.

ಲೀಗ್ ಇತಿಹಾಸದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಮೂರು ಪಂದ್ಯಗಳ ಮುಖಾಮುಖಿ ದಾಖಲೆಯಲ್ಲಿ 3-0 ಅಂತರದಲ್ಲಿ ಏಕಸ್ವಾಮ್ಯ ಸಾಸಿದ್ದ ಬೆಂಗಳೂರು ತಂಡ, ಇದೇ ಪ್ರಥಮ ಬಾರಿಗೆ ಡ್ರಾಗೆ ತೃಪ್ತಿಪಟ್ಟುಕೊಂಡಿದೆ.

ಸ್ಥಾವಿಸಾ ಸೊಜಾನೊವಿಕ್ (16ನೇ ನಿಮಿಷ) ಮತ್ತು ಕಾರೆಜ್ ಸೆಕ್ಯುಸನ್ (40ನೇ ನಿಮಿಷ) ತಲಾ ಒಂದು ಗೋಲ್ ದಾಖಲಿಸಿ ಪ್ರವಾಸಿ ಕೇರಳ ತಂಡದ ಮುನ್ನಡೆಗೆ ಕಾರಣರಾದರೆ, ಆತಿಥೇಯ ಬಿಎಫ್ಸಿ ಪರ ಉದಾಂತ ಸಿಂಗ್ (69ನೇ ನಿಮಿಷ) ಮತ್ತು ಸುನಿಲ್ ಛತ್ರಿ (85ನೇ ನಿ.) ತಲಾ ಒಂದು ಗೋಲ್ ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಪ್ರಥಮಾರ್ಧಕ್ಕೆ ಎರಡು ಗೋಲ್ ಗಳಿಸಿದ ಕೇರಳ ಬ್ಲಾಸ್ಟರ್ಸ್ ಎಫ್ ಸಿ, ಮೊತ್ತ ಮೊದಲ ಬಾರಿ ಕೆಳದ ಬಾರಿಯ ರನ್ನರ್ ಅಪ್ ಬೆಂಗಳೂರು ಎಫ್ ಸಿ ವಿರುದ್ಧ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಮೇಲುಗೈ ಸಾಸಿತು. ವಿರಾಮಕ್ಕೂ ಮುನ್ನ ಹಿನ್ನಡೆ ತಗ್ಗಿಸಲು ನಾಯಕ ಸುನಿಲ್ ಛಟ್ರಿ ಬಳಗ ನಡೆಸಿದ ಎಲ್ಲಾ ಯತ್ನಗಳು ಕೈಗೂಡದ ಕಾರಣ ಹಿನ್ನಡೆಗೆ ಒಳಗಾಗಬೇಕಾಯಿತು.

40ನೇ ನಿಮಿಷದಲ್ಲಿ ಸೀಮಿನ್ಸೆನ್ ಡಾಂಜೆಲ್ ನೆರವಿನಿಂದ ಕಾರಜ್ ಫೆಕ್ಯುಸನ್ ಆಕರ್ಷಕ ಗೋಲ್ ಗಳಿಸಿ ಕೇರಳ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸುವ ಮೂಲಕ ಅಂಕಪಟ್ಟಿ ಅಗ್ರಸ್ಥಾನಿ ಬಿಎಫ್ಸಿ ಮೇಲೆ ಒತ್ತಡ ಮುಂದುವರಿಸಿದರು. ಪ್ರವಾಸಿ ತಂಡದ ಮುನ್ನಡೆಯಿಂದ ಒತ್ತಡಕ್ಕೆ ಸಿಲುಕಿದ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ ಹಿನ್ನಡೆ ತಗ್ಗಿಸುವ ಹಾದಿಯಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಈ ವೇಳೆ ಅಲ್ಬರ್ಟ್ ಸೆರಾನ್ ಮತ್ತು ಎರಿಕ್ ಪಾರ್ತಾಲು ರೆಫರಿಯಿಂದ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು.

16ನೇ ನಿಮಿಷದಲ್ಲಿ ಆತಿಥೇಯರ ತಪ್ಪಿನಿಂದ ಪೆನಾಲ್ಟಿ ಅವಕಾಶ ಗಿಟ್ಟಿಸಿದ ಕೇರಳ ತಂಡ ಸ್ಥಾವಿಸಾ ಸೊಜಾನೊವಿಕ್ ಸ್ಪಾಟ್ ಕಿಕ್ ಮೂಲಕ ಗೋಲ್ ಗಳಿಸಿ ಪ್ರವಾಸಿ ತಂಡಕ್ಕೆ 1-0 ಅಂತರದ ಮುನ್ನಡೆ ತಂದುಕೊಟ್ಟರು. ಸ್ಟಾರ್ ಗೋಲ್ ಕೀಪರ್ ಗುರ್ ಪ್ರೀತ್ ಸಿಂಗ್ ಅವರ ಕಣ್ಣಪ್ಪಿಸಿದ ಸ್ಥಾವಿಸಾ ಆತಿಥೇಯರಿಗೆ ಆರಂಭಿಕ ಆಘಾತ ನೀಡಿದರು.

ಪ್ರಸಕ್ತ ಲೀಗ್‌ನಲ್ಲಿ ತವರಿನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿ ಸೋಲರಿಯದ ತಂಡವಾಗಿ ಹಾಗೂ ಗೆಲುವಿನ ನೆಚ್ಚಿನ ತಂಡವಾಗಿ ಕಣಕ್ಕಿಳಿದ ಬೆಂಗಳೂರು ಎಫ್ಸಿ ಸ್ವಯಂಕೃತ ಪ್ರಮಾದದಿಂದಾಗಿ ಲೀಗ್ ಇತಿಹಾಸದಲ್ಲಿ ಮೊದಲ ಬಾರಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಹಿನ್ನೆಡೆ ಅನುಭವಿಸಿತು.

ಬೆಂಗಳೂರು ಎಫ್ ಸಿ ಇದೇ ತಿಂಗಳ 9ರಂದು ಚೆನ್ನೈನ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಚೆನೈಯಿನ್ ಎಫ್‌ಸಿ ತಂಡವನ್ನು ಎದುರಿಸಲಿದೆ.