ಆತಿಥೇಯ ಕೋಟೆಯಲ್ಲಿ ಮರು ಹೋರಾಟಕ್ಕೆ ವೇದಿಕೆ ಸಜ್ಜು

ವಿಶ್ವಾಸದಲ್ಲಿ ಬೆಂಗಳೂರು ಎಫ್ಸಿ, ಐಎಸ್ಎಲ್ ಫೈನಲ್ ಮೇಲೆ ಕ್ವಾಡ್ರಟ್ ಬಳಗ ಚಿತ್ತ

ಬೆಂಗಳೂರು: ಇಂಡಿಯನ್ ಸೂಪರ್ ಲೀಗ್‌ನಲ್ಲಿ ಎರಡನೇ ಬಾರಿ ಯಶಸ್ವಿಯಾಗಿ ಫೈನಲ್ ಪ್ರವೇಶಿಸುವ ವಿಶ್ವಾಸದಲ್ಲಿರುವ ಬೆಂಗಳೂರು ಎಫ್ ಸಿ ಮನೆಯಂಗಳದ ಕೋಟೆಯಲ್ಲಿ ಸೋಮವಾರ ಸೆಮಿಫೈನಲ್ 2ನೇ ಲೆಗ್‌ನಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್ಸಿ ತಂಡದ ಸವಾಲು ಎದುರಿಸಲಿದೆ.

ಸೆಮಿಫೈನಲ್‌ನ ಮೊದಲ ಲೆಗ್‌ನಲ್ಲಿ ಬಿಎಫ್ಸಿ ವಿರುದ್ದ ತವರಿನಂಗಳದಲ್ಲಿ 2-1ರ ಅಂತರದಲ್ಲಿ ಜಯ ಗಳಿಸಿರುವ ನಾರ್ತ್‌ಈಸ್ಟ್ ಯುನೈಟೆಡ್, ಮುನ್ನಡೆಯೊಂದಿಗೆ ಬ್ಲೂಸ್‌ ಕೋಟೆಗೆ ಲಗೆಯಿಟ್ಟಿದೆ. ಆದರೆ ಇಡೀ ನಗರದ ಅಭಿಮಾನಿಗಳ ಬೆಂಬಲದೊಂದಿಗೆ ಬ್ಲೂಸ್ ತಿರುಗೇಟು ನೀಡಲಿದೆ ಎಂದು ಕೋಚ್ ಕಾರ್ಲೊಸ್ ಕ್ವಾಡ್ರಟ್ ನಂಬಿಕೆ ಹೊಂದಿದ್ದಾರೆ. ಗುವಾಹಟಿಯಲ್ಲಿ ನಡೆದ ಪಂದ್ಯದ ಅಂತಿಮ ಕ್ಷಣದಲ್ಲಿ ನಾರ್ತ್‌ಈಸ್ಟ್ ಗೋಲ್ ದಾಖಲಿಸಿದ ಪರಿಣಾಮ ಬಿಎಫ್ಸಿ ಸೋಲಿಗೆ ಒಳಗಾಗಬೇಕಾಯಿತು. ಆದರೆ ಈ ಸೋಲು ಇದೀಗ ಮೂರು ಅವಕಾಶಗಳನ್ನು ಮುಂದಿಟ್ಟಿದೆ. ಬೆಂಗಳೂರು ಎಫ್ ಸಿ ಒಂದು ವೇಳೆ 1-0 ಅಂತರದಲ್ಲಿ ಗೆದ್ದರೆ ನೇರವಾಗಿ ಫೈನಲ್ ತಲುಪಲಿದೆ. ಹಿಂದಿನ ಪಂದ್ಯದಲ್ಲಿ ಕ್ರಿಸ್ಟೋ ಹೆರ್ನಾಂಡೆಜ್ ಬಿಎಫ್ಸಿ ಪರ ಗೋಲ್ ಗಳಿಸಿದ್ದಾರೆ. ಒಂದು ವೇಳೆ ಬ್ಲೂಸ್ 2-1ರಲ್ಲಿ ಗೆದ್ದರೆ ಹೆಚ್ಚುವರಿ ಮತ್ತು ಪೆನಾಲ್ಟಿ ಮೂಲಕ ಫೈನಲ್ ಪ್ರವೇಶಿಸುವ ತಂಡವನ್ನು ನಿರ್ಧರಿಸಲಾಗುತ್ತದೆ. ಅಂತಿಮವಾಗಿ ನಾರ್ತ್‌ಈಸ್ಟ್ ಯುನೈಟೆಡ್ ತಂಡ ಎರಡು ಅಥವಾ ಅದಕ್ಕಿಂತಲೂ ಅಧಿಕ ಗೋಲ್ ಗಳಿಸಬೇಕಿದೆ. ಮುಂಬಯಿನಲ್ಲಿ ನಡೆಯಲಿರುವ ಫೈನಲ್‌ಗೆ ಬಿಎಫ್‌ಸಿ ಟಿಕೆಟ್ ಪಡೆಯಬೇಕಾದರೆ ಎರಡು ಗೋಲ್‌ಗಳ ಅಂತರದಿಂದ ಬಿಎಫ್ಸಿ ಗೆಲುವು ಸಾಧಿಸಿವುದು ಅನಿವಾರ್ಯ.

“ಅತಿ ದೊಡ್ಡ ಪಂದ್ಯಕ್ಕೆ ನಾವು ಸಜ್ಜಾಗಿದ್ದೇವೆ. ಕಂಠೀರವದಲ್ಲಿ ಸುಪ್ರಸಿದ್ದ ರಾತ್ರಿಯನ್ನು ಅಭಿಮಾನಿಗಳಿಗೆ ನೀಡಲು ಡ್ರೆಸಿಂಗ್ ಕೊಠಡಿಯತ್ತ ನಮ್ಮ ಚಿತ್ತ ಹರಿದಿದೆ. ಈ ಹಿಂದೆ ಹಲವು ಅದ್ಭುತ ಪಂದ್ಯಗಳನ್ನು ಅಭಿಮಾನಿಗಳಿಗೆ ನೀಡಿದ್ದೇವೆ. ಎಎಫ್ ಸಿ ಕಪ್‌ನಲ್ಲಿ ಜೆಡಿಟಿ ವಿರುದ್ದ ಉತ್ತಮ ಸಾಧನೆ ತೋರಿದ್ದೇವೆ. ಹಾಗೆಯೇ ಕಳೆದ ಆವೃತ್ತಿಯ ಸೆಮಿಫೈನಲ್ ಪಂದ್ಯದಲ್ಲಿ ಎಫ್ ಸಿ ಪುಣೆ ಸಿಟಿ ವಿರುದ್ದವು ಜಯಿಸಿದ್ದೇವೆ. ಖಂಡಿತವಾಗಿಯೂ ನಗರ ನಮಗೆ ನೆರವಾಗಲಿದ್ದು ಮತ್ತೊಮ್ಮೆ ವಿಶೇಷ ಹಾಗೂ ಮರೆಯಲಾಗದ ರಾತ್ರಿಯನ್ನು ನೀಡಲು ನಾವು ಯತ್ನಿಸಲಿದ್ದೇವೆ,” ಎಂದು ಕೋಚ್ ಕಾರ್ಲೊಸ್ ಭಾನುವಾರ ನಡೆದ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ತಂಡ ಈ ಹಿಂದೆ ಎರಡು ನಾಕೌಟ್ ಪಂದ್ಯಗಳಲ್ಲಿ ಪಾಲ್ಗೊಂಡ ಅನುಭವ ಹೊಂದಿದೆ. ತವರಿನಾಚೆ 1-1ರಲ್ಲಿ ಡ್ರಾ ಮಾಡಿಕೊಂಡಿದ್ದ ಬೆಂಗಳೂರು ಎಫ್ ಸಿ, ನಂತರ ಮನೆಯಂಗಳದಲ್ಲಿ ಮಲೇಷ್ಯಾ ಮೂಲದ ಜೋಹರ್ ತಂಡದ ವಿರುದ್ಧ 3-1ರಲ್ಲಿ ಗೆದ್ದು ಎಎಫ್ ಸಿ ಕಪ್ ಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ಗೌರವಕ್ಕೆ ಪಾತ್ರವಾಗಿದೆ. ಹಾಗೆಯೇ ಕಳೆದ ವರ್ಷದ ಐಎಸ್ ಎಲ್ ಸೆಮಿಫೈನಲ್‌ನಲ್ಲಿ ಎಫ್ ಸಿ ಪುಣೆ ಸಿಟಿ ವಿರುದ್ದ ಗೋಲ್ ರಹಿತ ಡ್ರಾ ಮಾಡಿಕೊಂಡಿದ್ದ ಬ್ಲೂಸ್ ನಂತರ ತವರಿನಲ್ಲಿ ಪ್ರವಾಸಿ ತಂಡದ ವಿರುದ್ಧ 3-1ರಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು. ಇದೀಗ ಅಂಥದ್ದೇ ಪರಿಸ್ಥಿತಿಗಳು ಮರುಕಳುಹಿಸಿದ್ದು, ತಂಡ ತನ್ನ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಲಿದೆ ಎಂದು ಕೋಚ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ ತವರಿನ ಕ್ರೀಡಾಂಗಣದಲ್ಲಿ ಬ್ಲೂಸ್ ಅದ್ಭುತ ದಾಖಲೆ ಹೊಂದಿದೆ. ಪ್ರಸಕ್ತ ಋತುವಿನಲ್ಲಿ ತವರಿನಲ್ಲಿ ಆಡಿದ ಯಾವುದೇ ಪಂದ್ಯದಲ್ಲಿ ಬೆಂಗಳೂರು ತಂಡ ಸೋತಿಲ್ಲ . ಲೀಗ್ ಹಂತದಲ್ಲಿ 6ರಲ್ಲಿ ಜಯ ಗಳಿಸಿರುವ ಬ್ಲೂಸ್, ಮೂರರಲ್ಲಿ ಡ್ರಾ ಮಾಡಿಕೊಂಡಿದೆ. ಹೀಗಾಗಿ ಕಂಠೀರವದಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ತನ್ನ ದಾಖಲೆ ವಿಸ್ತರಿಸಲು ಬಿಎಫ್ಸಿ ಎದುರು ನೋಡುತ್ತಿದೆ.

ಒಂದು ವೇಳೆ ಪಂದ್ಯ ಹೆಚ್ಚುವರಿ ಸಮಯಕ್ಕೆ ಹೋಗುವ ಸಾಧ್ಯತೆ ಕುರಿತು ಉತ್ತರಿಸಿದ ಕೋಚ್ ಕಾರ್ಲೊಸ್, “ಈ ಬಗ್ಗೆ ನಾನು ಊಹಿಸುವುದಿಲ್ಲ. ಆದರೆ ನಾವು ಖಚಿತವಾಗಿ ಪೂರ್ಣ ಸ್ಪರ್ಧಾತ್ಮಕತೆಯಿಂದ ಆಡಲು ಬಯುಸುತ್ತೇವೆ. ಪಂದ್ಯದ ಸಂದರ್ಭಗಳನ್ನಾದರಿಸಿ ಪಂದ್ಯವು ಹೆಚ್ಚುವರಿ ಸಮಯಕ್ಕೆ ಹೋಗಲಿದೆ. ನಾವು ನಮ್ಮ ಕೆಲಸ ನಿರ್ವಹಿಸಲು ಯತ್ನಿಸಲಿದ್ದೇವೆ,” ಎಂದು ಅವರು ಹೇಳಿದ್ದಾರೆ.

ಸೈಕರ್ ಬಾರ್ಥೊಲೊಮೆವ್ ಒಗ್ಲೆಚೆ ಮತ್ತು ಸ್ಫೂರ್ತಿಯುತ ಮಿಡ್‌ಫೀಲ್ಡ್ ಆಟಗಾರ ರೊಯ್ಲಿಂಗ್ ಬೊರ್ಗೆಸ್ ಗುವಾಹಟಿಯಲ್ಲಿ ನಡೆದ ಮೊದಲ ಲೆಗ್‌ನಲ್ಲಿ ಮಂಡಿರಜ್ಜು ಗಾಯಕ್ಕೆ ಒಳಗಾದ ಕಾರಣ ನಾರ್ತ್‌ಈಸ್ಟ್‌ಗೆ ಭಾರಿ ಹಿನ್ನಡೆಯಾದಂತಾಗಿದೆ. ಬೆಂಗಳೂರು ಪಂದ್ಯಕ್ಕೆ ಇವರಿಬ್ಬರು ಅಲಭ್ಯರಾಗಲಿದ್ದಾರೆ ಎಂದು ವೈದ್ಯಕೀಯ ತಂಡ ತಿಳಿಸಿದೆ. ಒಗೈಚೆ ನಾರ್ತ್‌ಈಸ್ಟ್ ಪರ ಪ್ರಸಕ್ತ ಋತುವಿನಲ್ಲಿ 12 ಗೋಲ್ ಗಳಿಸಿದ್ದಾರೆ. ಹಾಗೆಯೇ ಬೋರ್ಗೊಸ್ ತಂಡದ ಮಿಡ್ ಫೀಲ್ಡ್ ವಲಯ ನಿರ್ವಹಿಸುತ್ತಿದ್ದರು. ಇವರಿಬ್ಬರ ಬದಲಿಗೆ ಜುವಾನ್ ಮಸಿಯಾ ಮತ್ತು ನಿಖಿಲ್ ಕದಮ್ ಕಣಕ್ಕಿಳಿಯುತ್ತಿದ್ದಾರೆ.

ನಟ್‌ವರ್ಕ್ , ಕಲರ್ಸ್ ಕನ್ನಡ ಟಿವಿ, ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್‌ಸ್ಪೋರ್ಟ್ಸ್ ಹಾಟ್ ಸ್ಟಾರ್,ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.