ಸೆಮಿಫೈನಲ್ ಚಿತ್ತ ಬೆಂಗಳೂರು ಎಫ್ಸಿಗೆ ಬ್ಲಾಸ್ಟರ್ಸ್ ಸವಾಲು

ಎಂಟು ಪಂದ್ಯಗಳ ಗಾಯದ ವಿಶ್ರಾಂತಿ ನಂತರ ತಂಡಕ್ಕೆ ಮರಳು ಮಿಕು ಸಜ್ಜು, ಕೇರಳ ವಿರುದ್ದ ಗೆದ್ದರೆ ಕ್ವಾಡ್ರಟ್ ಬಳಗ ಪ್ಲೇ ಆಫ್ ಸ್ಥಾನ ಖಚಿತ

ಬೆಂಗಳೂರು: ಬೆಂಗಳೂರು ಎಫ್ ಸಿ ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಐಎಸ್ ಎಲ್ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್ ಸಿ ವಿರುದ್ಧ ಗೆಲುವಿನ ಇರಾದೆಯೊಂದಿಗೆ ಕಣಕ್ಕಿಳಿಯುತ್ತಿದೆ. ಬುಧವಾರದ ಪಂದ್ಯದಲ್ಲಿ ಬೆಂಗಳೂರು ತಂಡ ಜಯಿಸಿದರೆ, ಪ್ರಸಕ್ತ ಲೀಗ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಕೋಚ್ ಕಾರ್ಲೋಸ್ ಕ್ವಾಡ್ರಟ್ ಬಳಗ ಪಾತ್ರವಾಗಲಿದೆ.

ಸದ್ಯ 13 ಪಂದ್ಯಗಳನ್ನಾಡಿರುವ ಬ್ಲೂಸ್ 30 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ. ಬುಧವಾರ ಪ್ಲೇ ಆಫ್ ಸ್ಥಾನಕ್ಕೇರುವ ವಿಶ್ವಾಸದಲ್ಲಿರುವ ಬೆಂಗಳೂರು ತಂಡಕ್ಕೆ ಗಾಯದ ಕಾರಣ ವಿಶ್ರಾಂತಿಯಲ್ಲಿದ್ದ ಹಾಗೂ ನೂತನ ಆಟಗಾರರು ಮರಳುತ್ತಿರುವುದರಿಂದ ತಂಡದ ಶಕ್ತಿ ಇಮ್ಮಡಿಗೊಂಡಿದೆ. ಆದಾಗ್ಯೂ ಬೆಂಗಳೂರು ತಂಡದ ಕೋಚ್ ಕಾರ್ಲೊಸ್, ಉಭಯ ತಂಡಗಳು ಅಂಕಪಟ್ಟಿಯ ಸ್ಥಾನದಿಂದ ಅವುಗಳ ಸಾಮರ್ಥ್ಯವನ್ನು ಅಳೆಯಬಾರದು ಎಂದಿದ್ದಾರೆ.

ಪ್ರಸಕ್ತ ಋತುವಿನಲ್ಲಿ ನೀರಸ ಪ್ರದರ್ಶನ ನೀಡಿರುವ ಕೇರಳ ಆಡಿದ 14 ಪಂದ್ಯಗಳಿಂದ ಕೇವಲ ಒಂದರಲ್ಲಿ ಜಯಗಳಿಸಿದ್ದು , ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಬಿಎಫ್ಸಿ ಎದುರು ಈವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಜಯಿಸಿರುವ ಕೇರಳ ಪ್ರತಿಷ್ಠೆಗಾಗಿ ಸೆಣಸಲಿದೆ. ಕೋಚ್ ಡೇವಿಡ್ ಜೇಮ್ಸ್ ಕ್ಲಬ್‌ನಿಂದ ನಿರ್ಗಮನದ ಬಳಿಕ ಹಲವು ಬದಲಾವಣೆ ಹೊಂದಿರುವ ಕೇರಳ, ಪೋರ್ಚಿಗೀಸ್‌ನ ನೂತನ ಕೋಚ್ ನೆಲೊ ವಿಂಗಡದೊಂದಿಗೆ ಗೆಲುವಿಗಾಗಿ ಹಾತೊರೆಯುತ್ತಿದೆ. ಈ ಮಧ್ಯೆ ಸಿಕೆ ವಿನೀತ್ ಮತ್ತು ಹಲಿಚರಣ್ ನಾರ್ಜರಿ ಲೋನ್ ಮೂಲಕ ಅಂಕಪಟ್ಟಿಯ ಕೆಳ ಸ್ಥಾನಿ ಚೆನ್ನೈಯಿನ್ ಎಫ್ಸಿಗೆ ವರ್ಗಾಗೊಂಡಿರುವ ಕಾರಣ ಕೇರಳ ಸ್ಥಿತಿ ಚಿಂತಾಜನಕವಾಗಿದೆ. ಪ್ರಸಕ್ತ ಸಾಲಿನಲ್ಲಿ ಕೇರಳ ಕಠಿಣ ಸ್ಥಿತಿಯಲ್ಲಿದ್ದು ಲೆಕ್ಕಾಚಾರವಾಗಿ ಪ್ರಶಸ್ತಿಗೆ ಸ್ಪರ್ಧೆಯೊಡ್ಡುವ ಅಗ್ರ ನಾಲ್ಕು ತಂಡಗಳ ಪೈಪೋಟಿಯಿಂದ ಹೊರಬಿದ್ದಿದೆ.

ಆದರೆ ಯಾವುದೇ ಒತ್ತಡ ಹೊಂದಿರದ ಕೇರಳ, ಯಾವುದೇ ಹಂತದಲ್ಲಿ ತಿರುಗೇಟು ನೀಡುವ ಅತ್ಯಂತ ಅಪಾಯಕಾರಿ ತಂಡ ಎಂಬುದುನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ಬೆಂಬಲವನ್ನು ಯಾಚಿಸುತ್ತಿದೆ. ಮತ್ತೊಂದೆಡೆ ನಮ್ಮ ಮೊದಲ ಗುರಿ ಸಾಧನೆಗೆ ಒಂದೇ ಹಂತ ಬಾಕಿ ಉಳಿದಿದೆ. ಅದುವೇ ಸೆಮಿಫೈನಲ್ ಪ್ರವೇಶ. ವಿಭಿನ್ನ ಕಾರಣಕ್ಕಾಗಿ ಕೇರಳ ಮತ್ತು ಆತಿಥೇಯ ತಂಡ ಹೋರಾಟ ನಡೆಸಲಿವೆ. ಆದರೆ ಯಾವುದೇ ಹಂತದಲ್ಲೂ ಕೇರಳ ಫೇವರಿಟ್ ಎಂದು ನಾವು ಭರವಸೆ ನೀಡುವುದಿಲ್ಲ. ನಮ್ಮ ಗುರಿ ಸಾಧನೆಗೆ ನಾವು ಯತ್ನಿಸಲಿದ್ದೇವೆ, ” ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕ್ವಾಡ್ರಟ್ ಹೇಳಿದ್ದಾರೆ.

ಬೆಂಗಳೂರು ಎಫ್ ಸಿಗೆ ಒಳ್ಳೆಯ ಸುದ್ದಿ ದೊರೆತಿದೆ. ಪಾದದ ಗಾಯದ ಸಮಸ್ಯೆಯಿಂದಾಗಿ ಕಳೆದ ಎಂಟು ಪಂದ್ಯಗಳಿಂದ ಹೊರಗುಳಿದಿದ್ದ ಸ್ಟಾರ್ ಸ್ಪೆಕರ್ ಮಿಕು ಇದೀಗ ಚೇತರಿಸಿಕೊಂಡಿದ್ದು , ತಂಡಕ್ಕೆ ಮರಳಲು ಸಜ್ಜುಗೊಂಡಿದ್ದಾರೆ. ಬುಧವಾರದ ಪಂದ್ಯಕ್ಕೆ ಅವರು ಲಭ್ಯ ಇರಲಿದ್ದಾರೆ.

“ಬುಧವಾರದ ಪಂದ್ಯದಲ್ಲಿ ಮಿಕು ಭಾಗಿಯಾಗಲಿದ್ದಾರೆ. ಆತ ಚೇತರಿಸಿಕೊಳ್ಳಲು ಸಾಕಷ್ಟು ಕಠಿಣ ಶ್ರಮ ಹಾಕುತ್ತಿದ್ದಾರೆ. ಹೀಗಾಗಿ ಬುಧವಾರದ ಪಂದ್ಯದ ಕೆಲವು ಭಾಗದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ,” ಎಂದು ಕ್ವಾಡ್ರಟ್ ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಸ್ಪೇನ್ ಆಟಗಾರ ಲೂಯಿಸ್ಕಾ ವಿಲ್ಲಾ ಬುಧವಾರದ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ. ಮಿಡ್ ಫೀಲ್ಡರ್ ಲೂಯಿಸ್ಸಾ ಋತುವಿನ ಕೊನೆಯವರೆಗೆ ಇತ್ತೀಚೆಗೆ ಕ್ಲಬ್ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಬೆಂಗಳೂರಿನಗೆ ಆಗಮಿಸಿದ ಒಂದು ವಾರದಿಂದಲೂ ಲೂಯಿಸ್ಕಾ ತರಬೇತಿಯಲ್ಲಿ ತೊಡಗಿದ್ದಾರೆ.

“ಡಿಮಾಸ್ ಮತ್ತು ಕ್ರಿಸ್ಟೋ ಜತೆಗೆ ಲೂಯಿಸ್ಕಾ ತಂಡದ ಆಯ್ಕೆಯಾಗಿದ್ದಾರೆ. ತಂಡಕ್ಕೆ ಅನುಗುಣವಾಗಿ ಅವರನ್ನು ಬಳಸಿಕೊಳ್ಳಲಾಗುವುದು,’ ಎಂದು ಬ್ಲೂಸ್‌ ಕೋಚ್ ಹೇಳಿದ್ದಾರೆ. ಈ ನಡುವೆ ಲಾಲುತರ ರೆಡ್ ಕಾಡ್‌ಗೆ ಗುರಿಯಾಗಿರುವುದರಿಂದ ಕೇರಳ ಎಫ್ ಸಿಯ ಡಿಫೆನ್ಸ್‌ಗೆ ಭಾರಿ ಹೊಡೆತ ಬಿದ್ದಂತಾಗಿದೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ , ಹಾಟ್‌ ಸ್ಟಾರ್‌ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರ ಇರಲಿದೆ.