ಬೆಂಗಲೂರು ಜೂನಿಯರ್ಗಳು ಸೌತ್ ಯುನೈಟೆಡ್ ವಿರುದ್ಧ 5-0 ಗೆಲುವು ಸಾಧಿಸಿದ್ದಾರೆ

ಗೆದ್ದಬ್ಲೂ  ಫೈನಲ್‌ಗೆ ಲಗ್ಗೆ – ಎಡ್ಕಂಡ್ ಅವಳಿ ಗೋಲ್‌, ನೌಶದ್ ಮೂಸಾ ಬಳಗಕ್ಕೆ ಎಂಇಜಿ ಫೈನಲ್ ಸವಾಲು

ಬೆಂಗಳೂರು: ಸೂರ್ತಿದಾಯಕ ಪ್ರದರ್ಶನ ಮುಂದುವರಿಸಿದ ಎಡ್ಕಂಡ್ ಅವರ ಅವಳಿ ಗೋಲುಗಳ ನೆರವಿನಿಂದ ನೌಶದ್ ಮೂಸಾ ಸಾರಥ್ಯದಲ್ಲಿ ಪಳಗಿರುವ ಬೆಂಗಳೂರು ಎಫ್ ಸಿ(ಬಿಎಫ್‌ಸಿ) ಪುಟ್ಟಯ್ಯ ಸ್ಮಾರಕ ಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ.

ಬೆಂಗಳೂರಿನ ರಾಜ್ಯ ಫುಟ್ಬಾಲ್ ಮೈದಾನದಲ್ಲಿ ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮಿಂಚಿದ ಬೆಂಗಳೂರು ಎಫ್ ಸಿ 5-0 ಅಂತರದ ಗೋಲುಗಳಿಂದ ಯುನೈಟೆಡ್ ಎಫ್ ಸಿ ವಿರುದ್ದ ಗೆದ್ದು ಪ್ರಶಸ್ತಿಗೆ ದಾಪುಗಾಲಿಟ್ಟಿದೆ.

ಬಿಎಫ್ಸಿ ಪರ ಪರಾಗ್ ತ್ರಿವಾಸ (28ನೇ ನಿಮಿಷ) ಗೋಲಿನ ಖಾತೆ ತೆರೆದರೆ, ಎಡ್ಕಂಡ್ (52, 70 ನೇ ನಿಮಿಷ) ಎರಡು ಹಾಗೂ ಮೈರಾನ್ ಮೆಂಡಿಸ್ (54ನೇ ನಿಮಿಷ) ಮತ್ತು ಸಬ್ಸ್ಟಿಟ್ಯೂಟ್ ಲಿಯೋನ್ ಆಗಸ್ಟೀನ್ (85ನೇ ನಿಮಿಷ) ತಲಾ ಒಂದು ಗೋಲ್ ಬಾರಿಸಿ ತಂಡದ ನಿರ್ಣಾಯಕ ಪಾತ್ರವಹಿಸಿದರು.

ಪಂದ್ಯದ ಆರಂಭದಿಂದಲೇ ಬ್ಲೂ ಬಳಗ ಪ್ರಾಬಲ್ಯ ಮೆರೆಯಿತು. ಪಂದ್ಯ ಅರ್ಧಗಂಟೆ ಮುಗಿಯುವ ಎರಡು ಬಾಕಿ ಇರುವಾಗ ಪರಾಗ್ ಬಿಎಫ್ಸಿ ಪರ ಗೋಲಿನ ಖಾತೆ ತೆರೆದರು. ಇದಕ್ಕೂ ಮುನ್ನ ನಮ್ಯಾಲ್ ಭುಟಿಯಾ ಮತ್ತು ಲಾಲ್ಮುತ್ತುಂಗಾ ಬ್ಲೂ ಪರ ಗೋಲಿಗಾಗಿ ಸರ್ವಪ್ರಯತ್ನ ನಡೆಸಿದರು. ಈ ಮಧ್ಯೆ ಎಡ್ಕಂಡ್ ಸಹ ಎರಡು ಬಾರಿ ಗೋಲಿಗಾಗಿ ಯತ್ನಿಸಿದರು.

ಇದಾದ ಹತ್ತು ನಿಮಿಷಗಳಲ್ಲೇ ಬ್ಲೂ ಪಡೆ ನಯೊರೆಮ್ ರೋಶನ್ ಸಿಂಗ್ ತಡೆಯೊಡ್ಡುವ ಮುನ್ನ ತಂಡದ ಮುನ್ನಡೆಯನ್ನು ಎರಡಕ್ಕೆ ವಿಸ್ತರಿಸುವ ಸುವರ್ಣಾವಕಾಶ ಹೊಂದಿತ್ತು. ಆದರೆ ಬಿಎಫ್ಸಿಯ ಎಲ್ಲಾ ಯತ್ನಗಳನ್ನು ಎದುರಾಳಿ ತಂಡ ವಿಫಲಗೊಳಿಸಿತು.

ಪ್ರಥಮಾರ್ಧದಲ್ಲಿ ಗಳಿಸಿದ ಗೋಲಿನಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಬಿಎಫ್‌ಸಿ, ದ್ವಿತೀಯಾರ್ಧದಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಇದರ ಫಲವಾಗಿ 52ನೇ ನಿಮಿಷದಲ್ಲಿ ಎಡ್ಕಂಡ್ – ಗಳಿಸಿದ ಗೋಲಿನಿಂದ ಬೆಂಗಳೂರು ತಂಡ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಇದಾದ ಎರಡೇ ನಿಮಿಷಗಳ ಅಂತರದಲ್ಲಿ ಲಾಿಂದಿಕಾ ನೀಡಿದ ಚೆಂಡಿನ ಪಾಸನ್ನು ಸುಂದರವಾಗಿ ಹಿಡಿತಕ್ಕೆ ಪಡೆದ ಮೈರಾನ್ ಮೆಂಡಿಸ್ ತಂಡದ ಮುನ್ನಡೆಯನ್ನು 3-0ಗೆ ಹಿಗ್ಗಿಸಿ ತಂಡದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.

ಈ ವೇಳೆ ಸೌತ್ ಯುನೈಟೆಡ್ ನಡೆಸಿದ ಎಲ್ಲಾ ಗೋಲಿನ ಯತ್ನಗಳು ಕೈಗೂಡದೆ ತೀವ್ರ ನಿರಾಸೆ ಅನುಭವಿಸಿತು. ಗೆಲುವಿನತ್ತ ದಾಪುಗಾಲಿಟ್ಟಿದ್ದ ಬ್ಲೊಗೆ ಸಬ್ಸ್ಟಿಟ್ಯೂಟ್‌ ಲಿಯೋನ್ ನೆರವಿನಿಂದ ಎಡ್ಕಂಡ್ ವೈಯಕ್ತಿಕ 2ನೇ ಗೋಲ್ ಸೇರ್ಪಡೆಗೊಳಿಸಿದರು. ಈ ಮಧ್ಯೆ, ತಂಡದ ಸಹ ಆಟಗಾರರಿಂದ ನೆರವು ಪಡೆದ ಲಿಯೋನ್ ಆಗಸ್ಟೀನ್ 85ನೇ ನಿಮಿಷದಲ್ಲಿ ಗೋಲ್ ಗಳಿಸಿ ಸ್ಕೋರ್ ಪಟ್ಟಿಯಲ್ಲಿ ತಮ್ಮ ಹೆಸರು ಮೂಡುವಂತೆ ನೋಡಿಕೊಂಡರು.

ಸೌತ್ ಯುನೈಟೆಡ್ ಡಿಫೆಂಡರ್ ಅನೂಪ್ ಗೋಲ್ ದಾಖಲಿಸುವ ಅವಕಾಶ ಹೊಂದಿದರಾದರೂ ಬ್ಲೂ ಬಳಗದ ಗೋಲ್ ಕೀಪರ್ ಆದಿತ್ಯ ಪಾತ್ರಾ ದಿಟ್ಟ ರಕ್ಷಣೆ ಒಡ್ಡುವ ಮೂಲಕ ಎದುರಾಳಿ ತಂಡ ಏಕೈಕ ಗೋಲ್ ಬಾರಿಸಿದಂತೆ ನೋಡಿಕೊಂಡರು. ಇದೇ ತಿಂಗಳ 14ರಂದು ಭಾನುವಾರ ನಡೆಯಲಿರುವ ಪುಟ್ಟಯ್ಯ ಸ್ಮಾರಕ ಕಪ್ ಫೈನಲ್ ಪಂದ್ಯದಲ್ಲಿ ಬ್ಲೂ ಬಳಗ ಎಂಇಜಿ ತಂಡವನ್ನು ಎದುರಿಸಲಿದೆ.