ಗೆಲುವಿನೊಂದಿಗೆ ವರ್ಷಾಂತ್ಯಗೊಳಿಸಿದ ಬಿಎಫ್‌ಸಿ

ಎಟಿಕೆ ವಿರುದ್ಧ 1- 0 ಅಂತರದಲ್ಲಿ ಗೆದ್ದು ಮೂರು ಅಂಕ ಗಿಟ್ಟಿಸಿದ ಕ್ವಾಡ್ರಟ್ ಬಳಗ, ಎರಿಕ್ ಪಾರ್ತಾಲು ಜಯದ ರೂವಾರಿ

ಬೆಂಗಳೂರು: ನಿರೀಕ್ಷೆಯಂತೆ ಬೆಂಗಳೂರು ಎಫ್ ಸಿ ಪ್ರಸಕ್ತ ಐಎಸ್ಎಲ್‌ನ ಮೊದಲ ಹಂತದಲ್ಲಿ ಅಥ್ಲೆಟಿಕೊ ಡಿ’ ಕೋತಾ ವಿರುದ್ಧ ಗೆಲುವಿನೊಂದಿಗೆ ವರ್ಷಾಂತ್ಯಗೊಳಿಸಿದೆ.

ಇಲ್ಲಿ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸುನಿಲ್ ಛತ್ರಿ ನೇತೃತ್ವದ ಬೆಂಗಳೂರು ಎಫ್ ಸಿ 1-0 ಗೋಲಿನಿಂದ ಎಟಿಕೆ ತಂಡವನ್ನು ಸೋಲಿಸಿ ಪೂರ್ಣ 3 ಅಂಕ ಕಲೆಹಾಕಿತು. ಇದರೊಂದಿಗೆ ಆಡಿದ 11 ಪಂದ್ಯಗಳಲ್ಲಿ ಅಜೇಯ ದಾಖಲೆ ಕಾಯ್ದುಕೊಂಡ ಬೆಂಗಳೂರು ತಂಡ, ಒಟ್ಟು 27 ಅಂಕದೊಂದಿಗೆ ಹತ್ತು ತಂಡಗಳ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿಯಿತು. ಜತೆಗೆ ದ್ವಿತೀಯ ಸ್ಥಾನಿ ಮುಂಬಯಿ ಸಿಟಿ ಎಫ್ಸಿಗಿಂತ ಆರು ಅಂಕ ಅಂತರ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಬಿಎಫ್ಸಿ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದ್ದ ಎಟಿಕೆ ಸತತ ಐದು ಪಂದ್ಯಗಳ ಬಳಿಕ ಮೊದಲ ಸೋಲಿಗೆ ಒಳಾಗಾಗಿ, ಪಟ್ಟಿಯಲ್ಲಿ 16 ಅಂಕದೊಂದಿಗೆ ಆರನೇ ಸ್ಥಾನದಲ್ಲೇ ಸ್ಥಿರಗೊಂಡಿತು. ಬಿಎಫ್ಸಿ ಪರ ಎರಿಕ್ ಪಾರ್ತಾಲು 37ನೇ ನಿಮಿಷದಲ್ಲಿ ಏಕೈಕ ಗೋಲ್ ಗಳಿಸಿ ಜಯದ ರೂವಾರಿಯೆನಿಸಿದರು. ಪಂದ್ಯದ ಹೆಚ್ಚುವರಿ ಸಮಯದಲ್ಲಿ ಮುನ್ನಡೆ ವಿಸ್ತರಿಸುವ ಅದ್ಭುತ ಅವಕಾಶ ಛತ್ರಿಗೆ ದೊರೆಯಿತ್ತಾದರೂ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಆತಿಥೇಯ ತಂಡದ ನಾಯಕ ಎಡವಿದರು. ಹೀಗಾಗಿ 1-0 ಅಂತರಕಷ್ಟೇ ತೃಪ್ತಿಪಡಬೇಕಾಯಿತು.

ಅಂತಿಮ 20 ನಿಮಿಷಗಳ ಆಟದಲ್ಲಿ ಎಟಿಕೆ ಆಕ್ರಣಕಾರಿ ಆಟಕ್ಕೆ ಒತ್ತು ನೀಡಿದರೂ ಪ್ರಶಸ್ತಿ ಫೇವರಿಟ್ ಬೆಂಗಳೂರು ತಂಡದ ರಕ್ಷಣಾ ಕೋಟೆ ಭೇದಿಸಲು ಸಾಧ್ಯವಾಗಲಿಲ್ಲ. ಇದಕ್ಕೂ ಮುನ್ನ 74ನೇ ನಿಮಿಷದಲ್ಲಿ ಸ್ಟಾರ್ ಫಾರ್ವಡ್್ರ ಆಟಗಾರ ಉದಾಂತ ಸಿಂಗ್ ಗೋಲಿನ ಯತ್ನ ಮಾಡಿದರೂ ಕೆಲವೇ ಅಡಿಗಳ ಅಂತರದಲ್ಲಿ ಚೆಂಡು ಗೋಲ್ ಪೆಟ್ಟಿಗೆ ಬದಿಯಲ್ಲಿ ಹಾದು ಹೋಯಿತು. ಹೀಗಾಗಿ ಮುನ್ನಡೆ ವಿಸ್ತರಿಸುವ ಆತಿಥೇಯ ತಂಡದ ಆಸೆ ಈಡೇರಲಿಲ್ಲ .

ಎಟಿಕೆ 57ನೇ ನಿಮಿಷದಲ್ಲಿ ಸಮಬಲ ಸಾಧಿಸುವ ಉತ್ತಮ ಅವಕಾಶ ಗಳಿಸಿತ್ತು. ಆದರೆ ಫಾರ್ವಡ್್ರ ಆಟಗಾರ ಬಲ್ವಂತ್ ಸಿಂಗ್ ಎಸಗಿದ ಪ್ರಮಾದದಿಂದಾಗಿ ಸಿಕ್ಕ ಅವಕಾಶವನ್ನು ಕಳೆದುಕೊಂಡಿತು. ಮೊದಲಾರ್ಧದಲ್ಲಿ ಮುನ್ನಡೆಯ ಆತ್ಮವಿಶ್ವಾಸದಲ್ಲಿ ಬೆಂಗಳೂರು ದ್ವಿತೀಯಾರ್ಧ ಆರಂಭಿಸಿದರೆ, ಹಿನ್ನಡೆ ತಗ್ಗಿಸುವ ಒತ್ತಡದಲ್ಲಿ ಎಟಿಕೆ ಆಟ ಮುಂದುವರಿಸಿತು.

ಎರಿಕ್ ಪಾರ್ತಾಲು ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಎಫ್ ಸಿ ಪ್ರಥಮಾರ್ಧಕ್ಕೆ 1-0 ಅಂತರದಲ್ಲಿ ಮೇಲುಗೈ ಸಾಧಿಸಿತು. ಉಭಯ ತಂಡಗಳ ಪ್ರಬಲ ರಕ್ಷಣೆಯ ನಡುವೆಯೂ ಮಿಡ್ ಫೀಲ್ಡರ್ ಎರಿಕ್ ಪಾರ್ತಾಲು, ಕೀನ್ ಲೂಯಿಸ್ ಅವರ ನೆರವಿನಿಂದ ಆತಿಥೇಯ ಬಿಎಫ್ಸಿ ಪರ 37ನೇ ನಿಮಿಷದಲ್ಲಿ ಗೋಲ್ ಸಿಡಿಸಿ ತವರು ಅಭಿಮಾನಿಗಳ ಹರ್ಷೋದ್ದಾರಕ್ಕೆ ಕಾರಣರಾದರು. ರಾಹುಲ್ ಭೆಕೆ ಮತ್ತು ಕೀನ್ ಅವರ ನೆರವಿನಿಂದ ಚೆಂಡಿನ ಮೇಲಿನ ನಿಯಂತ್ರಣ ಸಾಧಿಸಿದ ಪಾರ್ತಾಲು ಪ್ರವಾಸಿ ತಂಡದ ರಕ್ಷಣಾ ಬಳಗವನ್ನು ಕಣ್ಣಪ್ಪಿಸುವುದರೊಂದಿಗೆ ಹೆಡರ್ ಮೂಲಕ ಗೋಲ್ ಗಳಿಸಿ, ತಂಡಕ್ಕೆ 1-0 ಅಂತರದ ಮುನ್ನಡೆ ಒದಗಿಸಿದರು.

33ನೇ ನಿಮಿಷದಲ್ಲಿ ಆಟಾಗರರ ಬದಲಾವಣೆಗೆ ಒತ್ತು ನೀಡಿದ ಕಾರ್ಲೊಸ್, ಗಾಯಗೊಂಡ ನಿಶು ಕುಮಾರ್ ಅವರನ್ನು ಹೊರಗಿಟ್ಟು , ಆಡುವ ಹನ್ನೊಂದರ ಬಳಗದಲ್ಲಿ ರಿನೋ ಆ್ಯಂಟೊಗೆ ಸ್ಥಾನ ಕಲ್ಪಿಸಿದರು.

ಬೆಂಗಳೂರು ತಂಡದ ದಿಟ್ಟ ರಕ್ಷಣೆಯ ನಡುವೆಯೂ ಪ್ರವಾಸಿ ಎಟಿಕೆ ಆಕ್ರಮಣಕಾರಿ ದಾಳಿ ಸಂಘಟಿಸಿದ ಕಾರಣ ಆತಿಥೇಯ ತಂಡದಲ್ಲಿ ಪದೇ ಪದೇ ಆತಂಕ ಎದುರಾಯಿತು. ಅದರಲ್ಲೂ 19ನೇ ನಿಮಿಷದಲ್ಲಿ ಎದುರಾಳಿ ಉತ್ತಮ ಗೋಲ್ ಗಳಿಕೆಯ ಪ್ರಯತವನ್ನು ಗೋಲ್ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧು ಅದ್ಭುತವಾಗಿ ಹಿಮ್ಮೆಟ್ಟಿಸಿದರು.

ಚೆಂಡಿನ ಮೇಲಿನ ಟ್ಯಾಕಲ್‌ಗೆ ಯತ್ನಿಸುವ ಬರದಲ್ಲಿ ಎಟಿಕೆ ತಂಡದ ಮ್ಯಾನುಯೆಲ್ ಲ್ಯಾನ್ಸರೋಟ್ 14ನೇ ನಿಮಿಷದಲ್ಲಿ ರೆಫರಿಯಿಂದ ಹಳದಿ ಕಾರ್ಡ್ ಎಚ್ಚರಿಕೆ ಪಡೆದರು. ಇದಾದ ಮೂರೇ ನಿಮಿಷಗಳ ಅಂತರದಲ್ಲೇ ಇದೇ ತಪ್ಪಿಗೆ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗದ ಅಲ್ಬರ್ಟ್ ಸಿನ್ ಸಹ ಹಳದಿ ಕಾರ್ಡ್‌ಗೆ ಗುರಿಯಾದರು.

ಮೊದಲ 11ನಿಮಿಷಗಳಲ್ಲಿ ಎರಡು ಬಾರಿ ಗೋಲ್ ಗಳಿಕೆಯ ಅವಕಾಶ ಸೃಷ್ಟಿಸಿದ ಬೆಂಗಳೂರು ತಂಡ ಮುನ್ನಡೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. 10ನೇ ನಿಮಿಷದಲ್ಲಿ ಆತಿಥೇಯ ಬಿಎಫ್‌ಸಿ ಆಟಗಾರರ ಹೊಂದಾಣಿಕೆ ಆಟದಲ್ಲಿನ ಕೊರತೆಯಿಂದಾಗಿ ಎದುರಾಳಿ ಗೋಲ್ ಗಳಿಸುವ ಅವಕಾಶ ಗಿಟ್ಟಿಸಿತ್ತಾದರೂ ಜುವಾನಾನ್ ಅವರ ಅದ್ಭುತ ರಕ್ಷಣೆಯಿಂದ ಇದು ತಪ್ಪಿತು. ಇದಕ್ಕೂ ಮುನ್ನ ಪ್ರಶಸ್ತಿ ಫೇವರಿಟ್ ಕಳೆದ ಬಾರಿಯ ರನ್ನರ್ ಅಪ್ ಬೆಂಗಳೂರು ಎಫ್ ಸಿ, ಪ್ರಸಕ್ತ ವರ್ಷದ ಕೊನೆ ಪಂದ್ಯದಲ್ಲಿ ಎಟಿಕೆ ವಿರುದ್ಧ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿಯಿತು.