ಕೊಚ್ಚಿಯಲ್ಲಿ ಸೋಲರಿಯದ ತಂಡಗಳ ಜಿದ್ದಾಜಿದ್ದಿ

ಬ್ಲೂಸ್ ಗೆದ್ದರೆ ಅಂಕಪಟ್ಟಿಯ ಅಗ್ರಸ್ಥಾನಕ್ಕೆ ಲಗ್ಗೆ , ಎದುರಾಳಿ ತಂಡದ ಬಗ್ಗೆ ಎಚ್ಚರಿಸಿದ ಕೋಚ್ ಕ್ವಾಡ್ರಟ್

ಕೊಚ್ಚಿ: ಇಲ್ಲಿನ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಕೇರಳ ಬ್ಲಾಸ್ಟರ್ಸ್ ಎಫ್ ಸಿ ವಿರುದ್ದ ಕಣಕ್ಕಿಳಿಯುತ್ತಿರುವ ಬೆಂಗಳೂರು ಎಫ್ ಸಿ ಐಎಸ್ಎಲ್ 5ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ಜತೆಗೆ ಹ್ಯಾಟ್ರಿಕ್ ಗೆಲುವಿನ ಇರಾದೆಯೊಂದಿಗೆ ಕಣಕ್ಕಿಳಿಯುತ್ತಿದೆ.

ತನ್ನ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈಯಿನ್ ಎಫ್ಸಿ ವಿರುದ್ಧ ಗೆಲುವಿನ ಖಾತೆ ತೆರೆದ ಬ್ಲೂಸ್, ನಂತರ ತವರಿನಲ್ಲೇ ಜಮ್ಶೆಡ್‌ಪುರ ಎಫ್ಸಿ ವಿರುದ್ಧ ಡ್ರಾ ಮಾಡಿಕೊಂಡಿತ್ತು. ಬಳಿಕ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ ಪುಣೆ ಮತ್ತು ಕೋಳ್ಕೊತಾದಲ್ಲಿ ಪೂರ್ಣ ಮೂರು ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಮುನ್ನಡೆದಿದೆ. ಆದರೆ ಸತತ ನಾಲ್ಕು ಪಂದ್ಯಗಳಲ್ಲಿ ಡ್ರಾ ಸಾಧಿಸಿ ಗೆಲುವಿಗೆ ಹಾತೊರೆಯುತ್ತಿರುವ ಕೇರಳ ತಂಡ ಬ್ಲೂಸ್‌ಗೆ ಕಠಿಣ ಸವಾಲು ಒಡ್ಡಬಹುದು ಎಂದು ಸ್ಪೇನ್ ಕೋಚ್ ಕ್ವಾಡ್ರಟ್ ನಂಬಿದ್ದಾರೆ.

“ಉತ್ತಮ ಕಾರ್ಯದೊಂದಿಗೆ ನಾವು ಉತ್ತಮ ಲಯದಲ್ಲಿ ಮುಂದುವರಿದಿದ್ದೇವೆ. ಆದರೆ ಎದುರಾಳಿ ತಂಡದ ತವರಿನಂಗಳದಲ್ಲಿ ಆಡುತ್ತೇದ್ದೇವೆ ಎಂಬುದು ಅತಿ ಮುಖ್ಯವಾಗಿದೆ. ನಮ್ಮಂತೆಯೇ ಅವರು ಗೆಲುವಿನ ಹಳಿಗೆ ಮರಳು ತವಕಿಸುತ್ತಿದ್ದಾರೆ. ಟೂರ್ನಿಯಲ್ಲಿ ಅಜೇಯ ದಾಖಲೆಯನ್ನು ಸಹ ಅವರು ಹೊಂದಿದ್ದಾರೆ. ಸೋಮವಾರದ ಪಂದ್ಯ ಅತ್ಯಂತ ಕಠಿಣವಾಗುತ್ತದೆ ಎಂಬುದಕ್ಕೆ ನಮಗೆ ಇದೊಂದು ಉತ್ತಮ ಕಾರಣ ಸಾಕಾಗಿದೆ,” ಎಂದು ಬಿಎಫ್ಸಿ ಕೋಚ್ ಕ್ವಾಡ್ರಟ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕೋಚ್ ಡೇವಿಡ್ ಜೇಮ್ಸ್ ಸಾರಥ್ಯದ ಕೇರಳ ತಂಡ ಕೋಡ್ಕೊತಾದಲ್ಲಿ 2-0 ಗೆಲುವಿನೊಂದಿಗೆ ಉತ್ತಮ ಅಭಿಯಾನ ಕಂಡಿದೆ. ಆನಂತರ ಆಡಿದ ನಾಲ್ಕು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿರುವ ಕೇರಳ ಒಟ್ಟು 7 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಆಸಕ್ತಿದಾಯಕ ಎಂದರೆ ಎಲ್ಲಾ ಪಂದ್ಯಗಳು ಗೋಲ್ ಸಹಿತ ಡ್ರಾಗೊಂಡಿವೆ. ಹೀಗಾಗಿ ಪ್ರಸಕ್ತ ಋತುವಿನಲ್ಲಿ ಮೂರು ಗೋಲ್ ಬಿಟ್ಟುಕೊಟ್ಟಿರುವ ಬೆಂಗಳೂರಿನ ರಕ್ಷಣಾ ಬಳಗ ನೆಹರೂ ಕ್ರೀಡಾಂಗಣದಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಜುವನಾನ್ ಗೋಸ್ಟಲೆಜ್ ಮತ್ತು ಅಲ್ಬರ್ಟ್ ಸೆರೈನ್ ಬೆಂಗಳೂರು ರಕ್ಷಣೆಯ ಹೃದಯ ಭಾಗವಾಗಿದ್ದಾರೆ. ಹಾಗೆಯೇ ನಿಶು ಮತ್ತು ರಾಹುಲ್ ಬೇಕೆ ಸಹ ದಾಳಿ ವಲಯದಲ್ಲಿ ಪ್ರಮುಖರಾಗಿದ್ದಾರೆ. ಹೀಗಾಗಿ ಕ್ವಾಡ್ರಟ್ ಸಮತೋಲನಕ್ಕಾಗಿ ತಂಡವನ್ನು ಸಂಯೋಜಿಸಬೇಕಿದೆ. ರಿನೊ ಆ್ಯಂಟೊ ಬ್ಲೂಸ್ ಪರ ಐಎಸ್ಎಲ್‌ನಲ್ಲಿ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ.

“ಜಾನ್ ಜಾನ್ಸನ್ ಮತ್ತು ಸುಭಾಸಿಶ್ ಬೋಸ್ ಅವರಂತಹ ಆಟಗಾರರ ಜಾಗವನ್ನು ತುಂಬುವುದು ಕಠಿಣ. ಆದರೆ ನಮ್ಮ ರಕ್ಷಣಾ ವಿಭಾಗ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಜುವನಾನ್ ಮತ್ತು ನಿಶು ಜತೆ ಹೊಂದಿಕೊಳ್ಳಲು ಆಲ್ಬರ್ಟ್ ಕೆಲವು ಸಮಯ ತೆಗೆದುಕೊಂಡರೂ ಸುಧಾರಿಸಿದ್ದಾರೆ. ಇದೇ ಹಾದಿಯಲ್ಲಿ ನಾವು ಮುಂದುವರಿಯಬೇಕಾದರೆ ಮತ್ತಷ್ಟು ಕಠಿಣ ಶ್ರಮವಹಿಸಬೇಕಿದೆ,” ಎಂದು ಕಾರ್ಲೊಸ್ ಹೇಳಿದ್ದಾರೆ.

ಕೇರಳದಲ್ಲಿ ಕಳೆದ ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಹೊಸ ವರ್ಷದ ಹಿಂದಿನ ದಿನ ನಡೆದ ಈ ಪಂದ್ಯದಲ್ಲಿ ಬೆಂಗಳೂರು ತಂಡ 3-1 ಗೋಲ್‌ಗಳಿಂದ ಜಯ ಗಳಿಸಿತ್ತು. ಇದಕ್ಕೆ ಕಾರಣವಾಗಿದ್ದು , ಸುನಿಲ್ ಛೇಟಿ. ಗಾಯದ ಸಮಯದಲ್ಲಿ ಮಿಕು ಎರಡು ಗೋಲ್ ಗಳಿಸುವ ಮುನ್ನ ಛೇಟಿ ಪೆನಾಲ್ಟಿ ಮೂಲಕ ಗೋಲಿನ ಖಾತೆ ತೆರೆದರು. ಬ್ಲೂಸ್ ಪರ ದಾಳಿ ವಿಭಾಗದಲ್ಲಿ ಯಾವುದೇ ಆತಂಕವಿಲ್ಲ. ಏಕೆಂದರೆ ಛೇಟಿ ಮತ್ತು ಮಿಕು ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ , ಹಾಟ್‌ ಸ್ಟಾರ್‌ ಮತ್ತು ಜಿಯೊ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.