ಡೆಲ್ಲಿ ಡೈನಮೋಸ್‌ಗೆ ಆತಿಥ್ಯ, ತವರಿನ ಹೋರಾಟಕ್ಕೆ ಹಿಂತಿರುಗಿದ ಬೆಂಗಳೂರು ಎಫ್ ಸಿ

ಬ್ಲೂಸ್‌ಗೆ ಅಜೇಯ ದಾಖಲೆ ಮುಂದುವರಿಸುವ ಹಾಗೂ ಅಗ್ರಸ್ಥಾನಕ್ಕೇರುವ ಗುರಿ, ಸೋಮವಾರದ ಪಂದ್ಯಕ್ಕೆ ಮಿಕು, ಡೆಲ್ಟಾಡೊ ಅಲಭ್ಯ

ಬೆಂಗಳೂರು: ಮನೆಯಂಗಳದಾಚೆ ಆಡಿದ ನಾಲ್ಕೂ ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ 12 ಅಂಕ ಕಲೆಹಾಕಿರುವ ಬೆಂಗಳೂರು ಎಫ್ಸಿ ಕೊನೆಗೂ ತವರಿಗೆ ಮರಳಿದ್ದು, ಸೋಮವಾರ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಅಂಕಪಟ್ಟಿಯ ಕೆಳಸ್ಥಾನಿ ಡೆಲ್ಲಿ ಡೈನಮೋಸ್‌ಗೆ ಆತಿಥ್ಯದೊಂದಿಗೆ ಕಣಕ್ಕಿಳಿಯುತ್ತಿದೆ.

ತವರಿನಾಚೆ ನಡೆದ ಸತತ ಪಂದ್ಯಗಳಿಗೆ ವೇದಿಕೆ ಕಲ್ಪಿಸಿದ ಎಲ್ಲಾ ಕ್ರೀಡಾಂಗಣಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ, ಸದ್ಯ ಪ್ರಸಕ್ತ ಐಎಸ್ಎಲ್‌ ಲೀಗ್‌ನಲ್ಲಿ ಅಜೇಯ ದಾಖಲೆ ಹೊಂದಿರುವ ಏಕೈಕ ತಂಡ ಎನಿಸಿದೆ.

ಆದರೆ ಈವರೆಗೂ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗದೆ ಸಂಕಷ್ಟದಲ್ಲಿರುವ ಡೆಲ್ಲಿ ವಿರುದ್ದ ಒಂದು ವೇಳೆ ಬೆಂಗಳೂರು ತಂಡ ಗೆದ್ದರೆ, ಮೂರು ಅಂಕ ಸಂಪಾದಿಸುವ ಮೂಲಕ ಎಫ್ ಸಿ ಗೋವಾ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ. ಈ ಮಧ್ಯೆ ಗೆಲುವಿಗೆ ತವಕಿಸುತ್ತಿರುವ ಡೆಲ್ಲಿ ತಂಡದ ಕುರಿತು ಪ್ರತಿಕ್ರಿಯಿಸಿರುವ ಕ್ವಾಡ್ರಟ್, ಪ್ರಸಕ್ತ ಲೀಗ್‌ನಲ್ಲಿ ಡೆಲ್ಲಿ ಈವೆರಗೂ ಖಾತೆ ತೆರೆಯದ ಏಕೈಕ ತಂಡವಾಗಿದೆ. ಹೀಗಾಗಿ ಅವರು ಅಪಾಯಕಾರಿಯಾಗಬಹುದು. ನಮ್ಮ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಆ ತಂಡ ಯತ್ನಿಸಬಹುದಾಗಿದೆ.ಹಾಗೆಯೇ ಉಭಯ ತಂಡಗಳು ಅಂಕಪಟ್ಟಿಯಲ್ಲಿನ ಸ್ಥಾನಗಳನ್ನು ಗಮನದಲ್ಲಿಟ್ಟುಕೊಳ್ಳದೆ ಕಣಕ್ಕಿಳಿಯಬೇಕಿದೆ. ಸುಮಾರು ಎರಡು ತಿಂಗಳ ನಂತರ ತವರಿನಾಚೆಯ ಸಾಕಷ್ಟು ಬೆಂಬಲದೊಂದಿಗೆ ಮನೆಯಂಗಳಕ್ಕೆ ಮರಳದ್ದೇವೆ. ಇದು ನಿಜವಾಯೂ ಕಠಿಣ. ಆದರೂ ತವರು ಅಭಿಮಾನಿಗಳ ಎದುರು ಪ್ರದರ್ಶನ ನೀಡಲು ರೋಮಾಂಚನಗೊಂಡಿದ್ದೇವೆ, ಎಂದು ಕ್ವಾಡ್ರಟ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಫ್‌ಸಿ ಗೋವಾ ವಿರುದ್ದ ಮಿಡ್‌ಫೀಲ್ಡರ್ ಎರಿಕ್ ಪಾರ್ತಾಲು (ಬೆರಳು ) ಮತ್ತು ಸೈಕರ್‌ ಮಿಕು (ಮೊಣಕಾಲು ) ಗಾಯದ ಸಮಸ್ಯೆಯಿಂದಾಗಿ ಅಲಭ್ಯತೆಯಾದರೂ ಗೆದ್ದು ತವರಿಗೆ ಮರಳಿರುವ ಬಿಎಫ್ಸಿ ಈ ಇಬ್ಬರು ಪ್ರಮುಖರಿಲ್ಲದೆ ಕಣಕ್ಕಿಳಿಯುತ್ತಿದೆ ಎಂದು ಕ್ವಾಡ್ರಟ್ ಹೇಳಿದ್ದಾರೆ. ಈ ಮಧ್ಯೆ ಪಾರ್ತಾಲು ಅಭ್ಯಾಸ ಆರಂಭಿಸಿದ್ದರೆ, ಮಿಕು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಎರಿಕ್ ನಮ್ಮೊಂದಿಗೆ ಅಭ್ಯಾಸ ಆರಂಭಿಸಿದ್ದಾರೆ.ಡೆಲ್ಲಿ ವಿರುದ್ಧ ಒಂದು ವೇಳೆ ಆತ ಕಣಕ್ಕಿಳಿಯಲು ಸಜ್ಜಾದರೆ ಈ ಬಗ್ಗೆ ನಾವು ತಿಳಿಸಲಿದ್ದೇವೆ. ಆದರೆ ಮಿಕು ಇನ್ನಷ್ಟು ಚೇತರಿಸಿಕೊಳ್ಳಬೇಕಿದೆ, ಎಂದು ಸ್ಪೇನ್‌ನ ಕ್ವಾಡ್ರಟ್ ಮಾಹಿತಿ ನೀಡಿದ್ದಾರೆ. ಕಳೆದ ವಾರ ಗೋವಾ ವಿರುದ್ಧದ ಪಂದ್ಯದಲ್ಲಿ ರೆಡ್ ಕಾರ್ಡ್‌ಗೆ ಗುರಿಯಾಗಿ ಒಂದು ಪಂದ್ಯದಿಂದ ಅಮಾನತುಗೊಂಡಿರುವ ಡಿಮಾಸ್ ಡೆಲ್ಟಾಡೊ ಗೈರು ಹಾಜರಿನಲ್ಲಿ ಬಿಎಫ್ಸಿ ಕಣಕ್ಕಿಳಿಯಲು ಸಜ್ಜುಗೊಂಡಿದೆ.

ಹೌದು… ಕೆಲವು ಪ್ರಮುಖ ಆಟಗಾರರು ನಮಗೆ ಅಲಭ್ಯರಾಗುತ್ತಿದ್ದಾರೆ. ಆದರೆ ಗೋವಾ ವಿರುದ್ದ ಉತ್ತಮ ಪ್ರದರ್ಶನ ನೀಡಿರುವ ಪ್ರತಿಯೊಬ್ಬರು ಮತ್ತಷ್ಟು ತಮ್ಮ ಜವಾಬ್ದಾರಿಯನ್ನು ಅರಿತಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಬದಲಾವಣೆಗೆ ನಾನು ನಿರೀಕ್ಷಿಸುವುದಿಲ್ಲ .

ತಂಡಕ್ಕೆ ತಮ್ಮ ಕೊಡುಗೆ ನೀಡಲು ಪ್ರತಿಯೊಬ್ಬರು ಯತ್ನಿಸಲಿದ್ದಾರೆ, ಎಂದು ಕ್ವಾಡ್ರಟ್ ಹೇಳಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಭೂತಾನ್‌ನ ಸ್ಪೆಕರ್ ಚೆಂಚೊ ಗ್ಯಾಲ್ಕ್ಶೆನ್ ಬೆಂಗಳೂರು ಪರ ಮೊದಲ ಬಾರಿಗೆ ಅಭಿಯಾನ ಆರಂಭಿಸಲಿದ್ದಾರೆ. ಈ ನಡುವೆ ಕ್ಸಿಸ್ಕೊ ಹೆರ್ನಾಂಡೆಜ್ ಮಿಡ್ ಫೀಲ್ಡರ್‌ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಡಿಮಾಸ್ ಡೆಲ್ಲಾಡೊ ಗೈರಿನಲ್ಲಿ ಎರಡನೇ ಸ್ಥಾಟ್‌ನ ತಂಡವನ್ನು ಕ್ವಾಡ್ರಟ್ ಮಿಡಲ್‌ನಲ್ಲಿ ಹೇಗೆ ನಿರ್ವಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಮತ್ತೊಂದೆಡೆ ಲೀಗ್‌ನಲ್ಲಿ ಏಕೈಕ ಪಂದ್ಯ ಗೆಲ್ಲದಿರುವ ಜೊಸೆಫ್ ಗೊಂಬಾವು ಸಾರಥ್ಯದ ಡೆಲ್ಲಿ , ಎಫ್‌ಸಿ ಗೋವಾ ವಿರುದ್ಧ 2-3ರಲ್ಲಿ ಸೋತರೆ, ಜಮ್ಶೆಡ್‌ಪುರ ಎಫ್ಸಿ ವಿರುದ್ಧ 2-2ರಲ್ಲಿ ಡ್ರಾ ಮಾಡಿಕೊಂಡು ಅಂಕ ಹಂಚಿಕೊಂಡಿದೆ.

ಆಟ್ಯಾಕ್ ಮತ್ತು ಡಿಫೆನ್ಸ್ ಎರಡರಲ್ಲೂ ಪ್ರಬಲವಾಗಿರುವ ಬೆಂಗಳೂರು ತಂಡ ಪ್ರಸಕ್ತ ಆವೃತ್ತಿಯಲ್ಲಿ ಕೇವಲ ಐದು ಗೋಲ್ ಬಿಟ್ಟುಕೊಟ್ಟಿದೆ. ನೂತನವಾಗಿ ಒಪ್ಪಂದ ಮಾಡಿಕೊಂಡಿರುವ ಅಲ್ಬರ್ಟ್ ಸೆರಾನ್ ಯಾವುದೇ ರೀತಿಯ ಸಮಯ ವ್ಯರ್ಥ ಮಾಡದೆ ಸೆಂಟರ್ ಡಿಫೆನ್ಸ್‌ನಲ್ಲಿ ಜುವನಾನ್ ಗೋಸ್ಟಲೆಜ್ ಜತೆ ಉತ್ತಮವಾಗಿ ಹೊಂದಿಕೊಂಡಿದ್ದಾರೆ. ಹಾಗೆಯೇ ರಾಹುಲ್ ಭೆಕೆ ಮತ್ತು ನಿಶು ಕುಮಾರ್ ದಾಳಿ ವಿಭಾಗದಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಕಸ್ಟೋಡಿಯನ್ ಗುರ್‌ಪ್ರೀತ್ ಸಿಂಗ್ ಸಂಧು ತಮ್ಮ ತಮ್ಮ ಅಮೋಘ ಲಯ ಮುಂದುವರಿಯಲು ಎದುರು ನೋಡುತ್ತಿದ್ದಾರೆ.

ಈ ಮಧ್ಯೆ ಸುನಿಲ್ ಛತ್ರಿ ಕ್ಲಬ್ ಪರ ಆರು ಆವೃತ್ತಿಗಳಲ್ಲಿ ಮತ್ತು ಎಲ್ಲಾ ಸ್ಪರ್ಧೆಗಳಿಂದ 150ನೇ ಪಂದ್ಯದಲ್ಲಿ ಕಣಕ್ಕಿಳಿಯತ್ತಿದ್ದಾರೆ. ಈ ಬಗ್ಗೆ ಕ್ವಾಡ್ರಟ್ ಛಟ್ರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಳೆದ ಆರು ವರ್ಷಗಳಿಂದ ಸುನಿಲ್ ಛಟ್ರಿ ಕ್ಲಬ್‌ನ ಸೂರ್ತಿಯ ಸೆಲೆಯಾಗಿದ್ದಾರೆ. ಆತ 150ನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿರುವ ಕುರಿತು ಎಲ್ಲರಿಗೂ ತಿಳಿಸುವ ಅಗತ್ಯವಿದೆ. ಅವರೊಬ್ಬ ಅದ್ಭುತ ವ್ಯಕ್ತಿ ಹಾಗೂ ವೃತ್ತಿಪರ ಆಟಗಾರನಾಗಿದ್ದಾರೆ. ಅವರ ಸಾಧನೆಗೆ ನಾವೆಲ್ಲರೂ ಹೆಮ್ಮೆ ಪಡುತ್ತೇವೆ. ಅವರ ಈ ಮೈಲುಗಲ್ಲಿನ ಸಂದರ್ಭದಲ್ಲಿ ಅವರಿಗೆ ಉತ್ತಮ ಫಲಿತಾಂಶ ನೀಡುವ ಮೂಲಕ ಸ್ಮರಣೀಯವಾಗಿಸಬೇಕಿದೆ, ಎಂದು ಕಾರ್ಲೊಸ್ ತಿಳಿಸಿದ್ದಾರೆ.